ಪ್ಯಾರೊ, ಡೆಲಿಯ ಫ್ರಾನ್ಚಾಸ್ಕಾ
	ಸು. 1420-1492. ಇಟಲಿಯ ಕಲಾ ಪುನರುಜ್ಜೀವನ ಕಾಲದ ಪ್ರಸಿದ್ಧ ಚಿತ್ರಕಾರ. ಕಲಾ ಸೃಷ್ಟಿಯಲ್ಲಿ ಅದರ ವಿವಿಧ ಅಂಗಗಳಲ್ಲಿರುವ ಅಮೂರ್ತ ಶೈಲಿಯ ರಚನೆಯಲ್ಲಿ ಪ್ರಾಮುಖ್ಯಗಳಿಸಿದವ. 

	ಅರೆಚೋದಲ್ಲಿ ಇದ್ದ ಸಂತ ಫ್ರಾನ್ಸಿಸ್ ಚರ್ಚಿನಲ್ಲಿ ರಚಿಸಿದ ಭಿತ್ತಿ ಚಿತ್ರಗಳು ಇವನ ಅಮರವಾದ ಕಲಾಕೃತಿಗಳು.

	ಹುಟ್ಟಿದ್ದು ಬೋರ್ಗೊ ಸ್ಯಾನ್ ಸಪೆಲ್‍ರೋದಲ್ಲಿ. ತಂದೆ ಬೆನೆಡಿಟೊ ಡಿ ಫ್ರಾನ್ಸೆಸಿ, ತೊಗಲು ಹದ ಮಾಡುವವ. ತಾಯಿ ರೋಮನಾ ಡಿ ಪೆರಿನೊ.

	ಕಲಾವಿದ ಡಾಮಿನಿಕೊ ವೆನಜಿûಯಾನೊ ಸನಿಹದಲ್ಲಿದ್ದ ಫ್ಲಾರೆನ್ಸಿನಲ್ಲಿ ಈತ ಕೆಲಕಾಲ ಕೆಲಸ ಮಾಡುತ್ತಿದ್ದ. ಸಾಂತ ಇಗಿಡಿಯಾನಲ್ಲಿ ಸಾಂತ ಮರಿಯಾನುವಾ ದವಾಖಾನೆಯವರಿಂದ ಭಿತ್ತಿ ಚಿತ್ರಗಳ ರಚನೆಗಾಗಿ ಈತ ಹಣ ಪಡೆದ ದಾಖಲೆಗಳಿವೆ.

	1442ರಲ್ಲಿ ಬೋರ್ಗೊ ಸಾನ ಸೆಪಕ್ರೊನಲ್ಲಿ ಸ್ಥಾನಿಕ ಸಂಸ್ಥೆಯ ಸದಸ್ಯನಾಗಿ ಕೆಲಸ ಮಾಡಿದ್ದುಂಟು. 

	ಸ್ವಯಂ ಸ್ಫೂರ್ತಿಯಿಂದ, ಧಾರ್ಮಿಕ ತತ್ತ್ವಗಳನ್ನೂ ಬೈಬಲ್ಲಿನ ಉಪದೇಶಗಳನ್ನೂ ಚಿತ್ರರೂಪದಲ್ಲಿ, ಭಿತ್ತಿ ಚಿತ್ರಗಳಾಗಿ ಈತ ಬಲು ಜಾಣ್ಮೆ ಹಾಗೂ ಶ್ರದ್ಧೆಯಿಂದ ಚಿತ್ರಿಸಿದ್ದಾನೆ. ಇವನ ಚಿತ್ರಗಳ ಆಕೃತಿ ರೂಪ, ಜೋಡಣೆ, ಮೈವಳಿಕೆ ಮೊದಲಾದವುಗಳಲ್ಲಿ ವೈಶಿಷ್ಟ್ಯವಿದೆ.

	1445ರಲ್ಲಿ ಮಿಸೆರಿಕಾರ್ಡಿಯಾ ಕಂಪನಿಯವರು ಶಾಂತಿಪೀಠದ ಮೇಲೆ, ಮೂರು ವರ್ಷದೊಳಗೆ ಚಿತ್ರಗಳನ್ನು ಬರೆದು ಕೊಡಲು ಇವನನ್ನು ಆಹ್ವಾನಿಸಿದರು. ಆದರೆ, ಈ ಕಾರ್ಯ ಆ ಅವಧಿಯಲ್ಲಿ ಮುಗಿಯದೆ 1462ರವರೆಗೆ ಮುಂದುವರೆಯಿತಾದರೂ ಅಮೂಲ್ಯವಾದ ಅನೇಕ ಚಿತ್ರಗಳನ್ನು ಈತ ಬರೆದೊಪ್ಪಿಸಿದ. 1474ರಲ್ಲಿ ಬಡಿಯಾದಲ್ಲಿ ಭಿತ್ತಿ ಚಿತ್ರ ಬಿಡಿಸಲು ಆಹ್ವಾನ ಬಂತು. 1480-82ರ ವರೆಗೆ ಬೋಗೋಸಾನ್ ಸೆಪಲ್‍ಕ್ರೊದ ಸಂತ ಬಾರ್ತಲೋಮ್ಯೂ ಕಂಪನಿಯ ಮುಖ್ಯಸ್ಥನಾಗಿ ಕೆಲಸ ಮಾಡಿದ. ಮುಂದೆ ಅನೇಕ ಚರ್ಚು, ದೇಗುಲ, ಆರಾಧನ ಮಂದಿರ ಹಾಗೂ ರಂಗಸ್ಥಳಗಳಲ್ಲಿ ಕಲಾಕೃತಿಗಳನ್ನು ರಚಿಸಲು ಈತನನ್ನು ಆಹ್ವಾನಿಸಿದರು. ಅಲ್ಲಿಯ ಕೃತಿಗಳು ಜೀವನದ ನೈಜ ಕತೆ, ಪೌರಾಣಿಕ ಕಥಾ ದೃಶ್ಯಗಳು, ಚಾರಿತ್ರಿಕ ಘಟನೆಗಳು, ಬೈಬಲ್ಲಿನ ನೀತಿಕಥೆಗಳು-ಇವುಗಳನ್ನು ಒಳಗೊಂಡು ತುಂಬ ಉತ್ತಮ ರೀತಿಯಲ್ಲಿ ಚಿತ್ರಿತವಾಗಿವೆ. 

	ಮಸಾಸಿಯಾ ಮತ್ತು ಬ್ರುನೆಲೆರ್ಖೆ ಕಲಾವಿದರಿಂದ ಆಕರ್ಷಿತನಾದ ಈತನಿಂದ ಅನೇಕ ಪ್ರಸಿದ್ಧ ಚಿತ್ರಕಾರರು ಪ್ರಭಾವಿತರಾದರು.

	ಈತನು ರಚಿಸಿದ ಶ್ರೇಷ್ಠ ಕೃತಿಗಳಲ್ಲಿ ಪ್ರಮುಖವಾದವು : ಬ್ಯಾಪ್ಟಿಸಂ ಆಫ್ ಕ್ರೈಸ್ಟ್, ಆ್ಯಡಮನ ಮರಣ, ಪುನರುತ್ಥಾನ, ಸಾಲಮನ್ ರಾಜ ಷೀಬದ ರಾಣಿಯನ್ನು ಸ್ವಾಗತಿಸುವುದು, ಕಾನ್‍ಸ್ಟ್ಯಾಂಟಿನ ವಿಜಯ, ಕೊಸೋರೊಯಿಸನ ಸೋಲು, ನಿಜ ಕ್ರಾಸಿನ ಶೋಧನೆ, ಕಾನ್‍ಸ್ಟ್ಯಾಂಟಿನ ಕನಸು, ಪ್ರಕಟಿಸು, ಜನ್ಮ, ಈತನ ಅನೇಕ ಕಲಾಕೃತಿಗಳು ರಾಷ್ಟ್ರೀಯ ಸಂಗ್ರಹಾಲಯಗಳಲ್ಲಿ ಚರ್ಚುಗಳಲ್ಲಿ ಕಂಗೊಳಿಸುತ್ತವೆ.

	ಪೀರೊ ಜೀವನ ಕರ್ತವ್ಯವನ್ನು ಅರಿತು, ಸತತೋದ್ಯೋಗಿಯಾಗಿ, ನಿಯಮಿತ ವ್ಯವಸ್ಥಿತ ಜೀವನ ಸಾಗಿಸಿ, ಅನೇಕಾನೇಕ ಚಿತ್ರ ಬರೆದು ಕೀರ್ತಿಶಾಲಿಯಾದ. ಜೀವಮಾನವಿಡಿ ವಿಶ್ರಾಂತಿಯನ್ನೇ ಕಾಣದೆ ಕೆಲಸ ಮಾಡುತ್ತಿದ್ದ ಅದ್ವಿತೀಯ ಪ್ರತಿಭಾಶಾಲಿ ಈತ. ಕೆಲಕಾಲ ಇವನ ದೃಷ್ಟಿ ಮಂದವಾಗಿತ್ತು.

	ಸತ್ತಾಗ ಇವನ ಮೃತ್ಯು ಪತ್ರದಂತೆ ಬಾಡೀಯಾದಲ್ಲಿ ಇದ್ದ ಬೋರ್ಗೊ ಸ್ಯಾನ್ ಸೆಪೊಲತೊ ಎಂಬಲ್ಲಿ ಇವನ ದೇಹವನ್ನು ಸಮಾಧಿ ಮಾಡಿದರು.

	ಇಷ್ಟಲ್ಲದೆ ಈತ ಜ್ಯಾಮಿತಿಯನ್ನು ಕುರಿತಂತೆ ಒಂದು ಘನವಾದ ಪುಸ್ತಕವನ್ನು ಬರೆದಿದ್ದಾನೆ.
(ಆರ್.ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ